ತೀಒರೆಲ್, ಆಕ್ಸೆಲ್ ಹೂಗೊ ಟೇಯಾಡಾರ್
 	1903-1982. ಜೀವರಸಾಯನವಿಜ್ಞಾನಿ. ಜನನ ಲಿಂಕೋಪಿಂಗ್‍ನಲ್ಲಿ (6-7-1903). ಸ್ಟಾಕ್ ಹೋಮ್‍ನ ಕ್ಯಾರೊಲಿನ್ ಇನ್ಸ್ಟಿಟ್ಯೂಟಿನಿಂದ ವೈದ್ಯಕೀಯದಲ್ಲಿ ಎಂ. ಡಿ. ಪದವಿ ಪಡೆದು (1930) ಖಾಸಗಿ ವೈದ್ಯವೃತ್ತಿಯನ್ನು ಪ್ರಾರಂಭಿಸಿದ, ಆದರೆ ಪೋಲಿಯೊ ತಗಲಿ ಹೆಳವನಾಗಿಬಿಟ್ಟಿದ್ದರಿಂದ ವೆೃದ್ಯವೃತ್ತಿಯನ್ನು ತ್ಯಜಿಸಿ ಸಂಶೋಧನೆಯಲ್ಲಿ ನಿರತನಾಗಬೇಕಾಯಿತು. 1936ರ ವರೆಗೆ ಉಪ್ಸಲ ವಿಶ್ವವಿದ್ಯಾಲಯದಲ್ಲಿದ್ದು ಅನಂತರ ಜರ್ಮನಿಗೆ ತೆರಳಿ, ಸ್ಟಾಕ್ ಹೋಮಿನಲ್ಲಿನ ನೊಬೆಲ್ ಇನ್ಸ್ಟಿಟ್ಯೂಟಿನ ಜೀವರಾಸಾಯನಿಕ ಶಾಖೆಯ ನಿರ್ದೇಶಕನಾಗಿ ನೇಮಕಗೊಂಡ (1937). 1942ರಲ್ಲಿ ಸ್ವೀಡನ್ನಿನ ವಿಜ್ಞಾನ ಅಕೆಡಮಿ ವೈದ್ಯಕೀಯ ಸಂಶೋಧನಾಲಯಗಳ ಸದಸ್ಯನಾದ. 

	ಜೀವಕೋಶಗಳಲ್ಲಿ ದಹನಕ್ರಿಯೆಗೆ ನೆರವಾಗುವ ಹಳದಿ ಬಣ್ಣದ ಎನ್‍ಜೈಮನ್ನು ತೀಒರೆಲ್ ಮೊತ್ತಮೊದಲಿಗೆ ಪರಿಶುದ್ಧ ಸ್ಥಿತಿಯಲ್ಲಿ ಪ್ರತ್ಯೇಕಿಸಿದ (1934). ಇದರಲ್ಲಿ ಎರಡು ಭಾಗಗಳಿವೆ. ಒಂದು ಕ್ರಿಯಾವರ್ಧಕ. ಅದು ಕೋಎನ್ ಜೈಮ್. ಅದರ ಆಂತರಿಕ ರಚನೆ ವೈಟಮಿನ್ ಃ2 ಎಂದು ಪರಿಚಿತವಾಗಿರುವ ರೈಬೊಫ್ಲೇವಿನ್‍ನಂತೆ. ಆದರೆ ಇದರ ಅಣುವಿಗೆ ಒಂದು ಫಾಸ್ಫೇಟ್ ಗುಚ್ಛ ಲಗತ್ತಾಗಿರುವುದು. ಅಷ್ಟೇ ವ್ಯತ್ಯಾಸ. ಇನ್ನೊಂದು ಭಾಗ ಅಪೊಎನ್eóÉೈಮ್. ಅದು ಶುದ್ಧ ಪ್ರೋಟೀನ್. ಹೀಗೆಂದು ಅವನ ಸಂಶೋಧನೆಗಳಿಂದ ದೃಢಪಟ್ಟಿತು. ಅಲ್ಲದೆ ಕೋಶಗಳು ಯಾವ ಕ್ರಿಯಾಸರಣಿಯನ್ನು ಅನುಸರಿಸಿ ಆಕ್ಸಿಜನ್ನನ್ನು ಬಳಸಿಕೊಳ್ಳುತ್ತವೆ ಅರ್ಥಾತ್ ಉಸಿರಾಡುತ್ತವೆ ಎಂಬುದನ್ನೂ ಈತ ತೋರಿಸಿದ. ಮಾಂಸಖಂಡದಲ್ಲಿರುವ ಕೆಂಪುಬಣ್ಣದ ಮಯೊಗ್ಲಾಬಿನ್ನನ್ನು ಸಹ ಪರಿಶುದ್ಧ ಸ್ಥಿತಿಯಲ್ಲಿ ಪ್ರತ್ಯೇಕಿಸಿದವರಲ್ಲಿ ತೀಒರೆಲ್ ಮೊದಲಿಗ. ಕುಡಿತದ ಅಮಲಿನಲ್ಲಿ ಇರುವವರ ರಕ್ತವನ್ನು ಪರೀಕ್ಷಿಸಿ ಅವರು ಮದ್ಯಪಾನ ಮಾಡಿರುವುದನ್ನು ರುಜುವಾತುಪಡಿಸುವ ಒಂದು ವಿಧಾನವನ್ನು ಇವನು ರೂಪಿಸಿದ್ದಾನೆ. ಸ್ವೀಡನ್ನಿನ ಆದ್ಯಂತ ಅದನ್ನು ಆಚರಣೆಗೆ ತರಲಾಯಿತು. ಫ್ರೊಆಪ್ಪಿನ್ ಎಂಬ ಜೀವಿರೋಧಕವನ್ನು ಪತ್ತೆಹಚ್ಚಿದುದು ತೀಒರೆಲ್‍ನ ಇನ್ನೊಂದು ಸಾಧನೆ. ಆದರೆ ಇವು ಯಾವುವೂ ಉತ್ಕರ್ಷಣ ಎನ್eóÉೈಮ್‍ಗಳ ಲಕ್ಷಣ ಮತ್ತು ಕಾರ್ಯವಿಧಾನಗಳನ್ನು ಈತ ಕುರಿತು ನಡೆಸಿದ ವ್ಯಾಪಕ ಸಂಶೋಧನೆಗಳನ್ನು ಸರಿಗಟ್ಟಲಾರವು. ಅದಕ್ಕಾಗಿ 1955ರಲ್ಲಿ ವೈದ್ಯಕೀಯ ವಿಭಾಗದ ನೊಬೆಲ್ ಪಾರಿತೋಷಿಕ ಇವನಿಗೆ ಸಿಕ್ಕಿತು. 												(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ